ಮಣಿ ಅಯ್ಯರ್, ಮಧುರೈs
	1912-68. ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧ ಗಾಯನಪಟು ಮತ್ತು ನವಶೈಲಿಯ ಪ್ರವರ್ತಕ. ತಂದೆ ರಾಮಸ್ವಾಮಿ ಅಯ್ಯರ್ ಉತ್ತಮ ಸಂಗೀತ ಶಾಸ್ತ್ರ ಕೋವಿದ. ದೊಡ್ಡಪ್ಪ ಮಧುರೈ ಪುಷ್ಪವನಮ್ ಅಯ್ಯರ್. ಅಂದಿನ ದಿನಗಳಲ್ಲಿ ಸಂಗೀತ ದಿಗ್ಗಜ ಎನಿಸಿಕೊಂಡಿದ್ದವರು. ಇಂಥ ಸಂಗೀತ ಪರಿಸರದಲ್ಲಿ 25-10-1912ರಂದು ಮಾಯಾವರಮ್‍ನಲ್ಲಿ ಮಧುರೈ ಮಣಿ ಅಯ್ಯರ್ ಜನಿಸಿದರು. ಶಾಲಾ ವಿದ್ಯಾಭ್ಯಾಸದ ಜೊತೆಗೆ ಮಧುರೆಯಲ್ಲೇ ವಾಸವಾಗಿದ್ದ ರಾಜಮ್ ಭಾಗವತರ್ ಎಂಬವರಲ್ಲಿ ಬಾಲಕ ಮಣಿ ಗುರುಕುಲವಾಸ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಪಡೆದ. ಮಷವರಾಯನೇಂದಲ್ ಸುಬ್ಬರಾಮ ಭಾಗವತರ್ ಎಂಬ ಸುಪ್ರಸಿದ್ಧ ಹಿರಿಯ ವಿದ್ವಾಂಸರ ಶಿಷ್ಯರಾಗಿದ್ದ ರಾಜ ಭಾಗವತರ್ ತಮ್ಮ ಗುರುಗಳಂತೆಯೇ ಕಲ್ಪನಾ ಸ್ವರಗಳನ್ನು ಲೀಲಾಜಾಲವಾಗಿ ಹಾಡುವುದರಲ್ಲಿ ಎತ್ತಿದ ಕೈ. ಮಣಿ ಸಹ ಈ ಕಲೆಯನ್ನು ಕರಗತ ಮಾಡಿಕೊಂಡ. ತಂದೆಯಿಂದಲೂ ಸಾಕಷ್ಟು ಶಾಸ್ತ್ರಜ್ಞಾನ ಪಡೆದ.

	ಮುಂದೆ ಗಾಯಕ ಶಿಖಾಮಣಿ ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಮಧುರೈಯಲ್ಲಿ ಬಂದು ನೆಲಸಿ ಶ್ರೀ ತ್ಯಾಗರಾಜ ವಿದ್ಯಾಲಯ ಎಂಬ ಸಂಗೀತ ಕಲಾಶಾಲೆ ಸ್ಥಾಪಿಸಿದರು. ಮಣಿ ಅಲ್ಲಿ ವಿದ್ಯಾರ್ಥಿಯಾಗಿ ಸೇರಿದ. ವಿದ್ಯಾರ್ಥಿಗಳು ಲಕ್ಷಣ, ಲಕ್ಷ್ಯಗಳ ಜ್ಞಾನ ಸಂಪಾದನೆಯ ಜೊತೆಗೆ ಇತರ ಹಿರಿಯ ವಿದ್ವಾಂಸರ ಕಛೇರಿಗಳನ್ನು ಕೇಳಿ ಅವುಗಳ ಉತ್ತಮಾಂಶಗಳನ್ನು ಗ್ರಹಿಸಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಳ್ಳಲು ಅಲ್ಲಿಯ ಶಿಕ್ಷಣಕ್ರಮ ಅನುಕೂಲವಾಗಿತ್ತು. ಶಾಲಾ ವಿದ್ಯಾಭ್ಯಾಸವನ್ನು ಐದನೆಯ ತರಗತಿಗೆ ನಿಲ್ಲಿಸಿ ಪೂರ್ತಿಯಾಗಿ ಸಂಗೀತದ ಕಡೆ ಗಮನ ಕೊಟ್ಟ ಮಣಿ ಹನ್ನೆರಡನೆಯ ವಯಸ್ಸಿನಲ್ಲಿ ತಮಿಳುನಾಡಿನ ಅಲವಕ್ಕೋಟೆ ಎಂಬ ಊರಿನ ದೇವಾಲಯದ ಕುಂಭಾಭಿಷೇಕದಲ್ಲಿ (1924) ರಂಗಪ್ರವೇಶ ಕಛೇರಿ ಮಾಡಿದ. ಅಂದಿನಿಂದ ಎಡೆಬಿಡದೆ ಇವನ ಕಛೇರಿಗಳು ಏರ್ಪಾಡಾಗುತ್ತಿದ್ದವು.

	1927ರಲ್ಲಿ ಮದರಾಸಿನಲ್ಲಿ ಸಂಗೀತ ವಿದ್ವತ್ಸಭೆ (ಮ್ಯೂಸಿಕ್ ಅಕಾಡೆಮಿ) ಸ್ಥಾಪಿತವಾದಾಗ ಮಣಿ ಅಯ್ಯರ್ ಕಛೇರಿ ಮಾಡಿದರು. ಇವರ ಗಾಯನ ಶೈಲಿಯ ನಾವೀನ್ಯ ಎಲ್ಲರನ್ನೂ ಆಕರ್ಷಿಸಿತು. ಅದರ ಪ್ರಧಾನಾಕರ್ಷಣೆ ಗಮನಾರ್ಹ ಶ್ರುತಿ ಶುದ್ಧತೆ ಮತ್ತು ಸರಳತೆ. ಹಾಡುವಾಗ ಹೊರಬರುತ್ತಿದ್ದ ಕೆಲವು ಶಬ್ದಗಳು ಮೊದಲಿಗೆ ವಿಚಿತ್ರವಾಗಿ ಕಂಡರೂ ಶ್ರುತಿಯೊಡನೆ ಲಯಿಸಲು ನಡೆಯುತ್ತಿದ್ದ ಪ್ರಯತ್ನ ಎಂಬುದು ಅನಂತರ ಅರ್ಥವಾಗುತ್ತಿತ್ತು.

	ಸ್ವರವಿನ್ಯಾಸ ಕರ್ನಾಟಕ ಸಂಗೀತ ಅವಿಭಾಜ್ಯ ಅಂಗ. ಮಣಿ ಅಯ್ಯರ್ ಕಲ್ಪನಾ ಸ್ವರಗಳನ್ನು ಹಾಡುವುದರಲ್ಲಿ ನಿಸ್ಸೀಮರು. ಆಯ್ದುಕೊಂಡ ಕೃತಿಯ ಅಥವಾ ಪಲ್ಲವಿಯ ತಾಳದ ಚೌಕಟ್ಟಿನಲ್ಲಿ, ಆಯಾ ರಾಗದ ಆರೋಹಣ ಅವರೋಹಣ ಸ್ವರಗಳನ್ನು ವಿವಿಧ ರೀತಿಯಲ್ಲಿ ಮುಖ್ಯವಾಗಿ ಸರ್ವಲಘು ಎನಿಸಿಕೊಳ್ಳುವ ನಾಲ್ಕು ನಾಲ್ಕು ಸ್ವರಗಳ ಜೋಡಣೆಯ ನಡೆಯಲ್ಲಿ ಹಾಡುತ್ತಿದ್ದುದು ಪಂಡಿತ ಪಾಮರ ರಂಜಕವಾಗಿದ್ದು ಪಕ್ಕವಾದ್ಯ ನುಡಿಸುತ್ತಿದ್ದ ಹಿರಿಯ ಕಿರಿಯ ಕಲಾವಿದರನ್ನೂ ಸ್ಫೂರ್ತಿಗೊಳಿಸುತ್ತಿತ್ತು.

	ಮಣಿ ಅಯ್ಯರ್ ಸಂಗೀತ ತ್ರಿಮೂರ್ತಿಗಳ ಹಾಗೂ ಗುರುಗಳಾಗಿದ್ದ ಮುತ್ತಯ್ಯ ಭಾಗವತರ ಅನೇಕ ಅಪ್ರಚಲಿತ ಕೃತಿಗಳನ್ನೂ ಹೆಚ್ಚು ಪ್ರಸಿದ್ಧವಾಗಿರದಿದ್ದ ಚಿತ್ತರಂಜನಿ, ಕಾಪಿ ನಾರಾಯಣಿ, ಮೋಹನ ಕಲ್ಯಾಣಿ, ವಿಜಯನಾಗರಿ, ವಲಜಿ, ಅಮೃತವರ್ಷಿಣಿ, ಸರಸ್ವತಿ ಮುಂತಾದ ರಾಗಗಳ ರಚನೆಗಳನ್ನೂ ದೀಕ್ಷಿತರ ನವಾಹರಣ ಮತ್ತು ನವಗ್ರಹ ಕೃತಿಗಳನ್ನೂ ಅನೇಕ ತಮಿಳು ಕೃತಿಗಳನ್ನೂ ತಮ್ಮ ಗಾಯನ ಶೈಲಿಯ ರಂಜಕತೆಯಿಂದ ಜನಪ್ರಿಯಗೊಳಿಸಿದರು. ಪಾಶ್ಚಾತ್ಯ ಸಂಗೀತ ಆಧಾರಿತ ನೋಟ್ ಎಂಬ ಮಟ್ಟನ್ನೂ ಹಾಡಿ ಎಲ್ಲರೂ ಮೆಚ್ಚುವಂತೆ ಮಾಡಿದರು.

	1943ರಲ್ಲಿ ತಂಜಾವೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಗಾನಕಲಾಧರ, 1959ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಂಗೀತ ಕಲಾನಿಧಿ, ಮದರಾಸಿನ ತಮಿಳು ಇಶೈ ಸಂಘದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಇಶೈಪೇರರಿಜ್ಞರ್ ಬಿರುದುಗಳನ್ನು ಪಡೆದರು. 1960ರಲ್ಲಿ ಭಾರತ ಸರ್ಕಾರದ ಅತ್ಯುತ್ತಮ ಗಾಯಕ ಪುರಸ್ಕಾರ ದೊರೆಯಿತು.

	ನಾದಯೋಗಿಯಾಗಿ ನಾದೋಪಾಸನೆ ಮಾಡುತ್ತ ಬಾಳಿದ ಮಧುರೈ ಮಣಿ ಅಯ್ಯರ್ ಇಪ್ಪತ್ತನೆಯ ಶತಮಾನದ ಸಂಗೀತ ಮೇಧಾವಿಗಳಲ್ಲಿ ಒಬ್ಬರು. ಹೀಗೆ ನಲವತ್ತನಾಲ್ಕು ವರ್ಷಗಳ ಕಾಲ ಕರ್ನಾಟಕ ಸಂಗೀತದ ಹಿರಿಮೆಯನ್ನು ನಾಡಿನ ಮೂಲೆಮೂಲೆಯಲ್ಲೂ ಹರಡಿದ ಇವರು 8-6-1968ರಂದು 56ನೆಯ ವಯಸ್ಸಿನಲ್ಲಿ ಮದರಾಸಿನ ಸ್ವಗೃಹದಲ್ಲಿ ವಿಧಿವಶವಾದರು. ಇಂದಿನ, ಮುಂದಿನ ಪೀಳಿಗೆಯ ಸಂಗೀತ ವಿದ್ಯಾರ್ಥಿಗಳಿಗೆ, ಸಂಗೀತ ಪ್ರೇಮಿಗಳಿಗೆ ಇವರ ಧ್ವನಿ ಮುದ್ರಣಗಳು ಮಾರ್ಗದರ್ಶಿ.	
(ಟಿ.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ